ಶನಿವಾರ, ಏಪ್ರಿಲ್ 25, 2015

ಅಮ್ಮಾ











ಅಮ್ಮಾನಿನ್ನ ಮಮತೆಯ ಸಾಗರದ
ಸಾರವನ್ನು ಜಗತ್ತಿಗೆ ಸಾರಬೇಕಿಂದು
ಅಮ್ಮಾ
ಅಮ್ಮನಿಲ್ಲದ ಜಗತ್ತು
ಬರೀ ಸೊನ್ನೆಯೆಂದು

ನನ್ನ ಹುಟ್ಟು ನಿನ್ನ ಹರಕೆಯ ಫಲ
ನನ್ನ ಜ್ವರ ನಗಡಿಗಳಿಗೆಲ್ಲ ರಾಮಭಾಣ
ನಿನ್ನ ಕೈಯ ಗುಣ
ನನ್ನ ಬದುಕು ಬೆಳಕು ಕಂಡದ್ದು
ನಿನ್ನ ಹರಕೆ ಹಾರೈಕೆಗಳಿಂದ
ದೇವರ ಮುಡಿಗೆ ಅತಿ ಹೆಚ್ಚು ಹರಕೆ
ಸಂದಾಯವಾಗಿದ್ದೂ
ನಿನ್ನ ಪಾವನ ಕೈಗಳಿಂದ
ಶಾಲೆಯ ಮೆಟ್ಟಿಲು
ತುಳಿಯದವಳ
ಹ್ರದಯದರಮನೆಯಲ್ಲಿ
ಯಾವ ಕಾಲೇಜು ಯೂನಿವರ್ಸಿಟಿಗಳೂ
ಕಲಿಸಿ ಕೊಡದ ಪ್ರೀತಿ ಮಮತೆ ವಾತ್ಸಲ್ಯ
ಕಾಳಜಿಯ ಕಂಡು ಈ ಮಗ ಬೆರಗಾಗಿದ್ದಾನೆ
ಅಪ್ಪನಿಲ್ಲದ ಶೂಣ್ಯ ಆವರಿಸಿದಾಗಲೆಲ್ಲ
ಅಲ್ಲಿ ಅಮ್ಮನನ್ನೇ ತುಂಬಿ ಹಗುರಾಗಿದ್ದಾನೆ
ಕೆಲಸಕ್ಕೆಂದು ನಿನ್ನ ಬಿಟ್ಟು ಊರ ಬಿಟ್ಟು
ಊರಲ್ಲದ ಊರಿಗೆ
ನಿನ್ನ ಮಾತು ಮೀರಿ ಬಂದ
ಮೇಲೆ ತಿಳಿಯತೊಡಗಿದೆ
ನೀನಿಲ್ಲದ ನನ್ನ ಬಾಳ ಕಥೆ
ಅದು ಕಥೆಯಲ್ಲ
ಬರಿಯ ವ್ಯಥೆ!!
ನಿನ್ನ ನೆರಿಗೆ ಸೀರೆಯ
ಕಮಟು ವಾಸನೆಯಲ್ಲಿ
ನಿದಿರೆಯ ಜೊಂಪಿಗೆ ಹತ್ತುತ್ತಿದ್ದವಗೆ
ಇಲ್ಲಿನ ರೂಂ ಸ್ಪ್ರೇಯ ಘಮ ಘಮಕ್ಕೆ
ನಿದ್ರೆ ಹತ್ತದೆ ಇರುಳು ಬತ್ತುತಿದೆ!
ನನ್ನಿಷ್ಟದ ನಿನ್ನ ಕೈಯ
ನೀರು ದೋಸೆ ಬಸಳೆ ಸೊಪ್ಪು ಸಾರು ಎದರು
ಇಲ್ಲಿನ ಪಿಜ್ಜಾ ಬರ್ಗರ್ ತಿಂದು ತಿಂದು
ನಾಲಿಗೆ ಸತ್ತು ಬಿಟ್ಟಿದೆ
ಅಮ್ಮಾ ಮಮತೆ ವಾತ್ಸಲ್ಯದ ಪಂದ್ಯದಲ್ಲಿ ದಿನಾ
ನನ್ನ ಸೋಲಿಸುತ್ತೀಯ ಒಮ್ಮೆಯಾದರೂ
ನಿನ್ನಷ್ಟೆ ಮಮತೆ ವಾತ್ಸಲ್ಯ ನಾನು
ತೋರಿಸಬೇಕು ನಿನ್ನ ಮೇಲೆ ಒಮ್ಮೆ
ಸೋತವಳಂತೆ ನಟಿಸು ನಾ ಗೆಲ್ಲಬೇಕು.
ಅಬ್ದುಲ್ ಜಬ್ಬಾರ್ ಪರಪ್ಪು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ